ನರ್ಮದಾ
	ಭಾರತದ ಒಂದು ನದಿ. ಸಪ್ತ ಪುಣ್ಯನದಿಗಳಲ್ಲಿ ಒಂದೆಂದು ಹಿಂದುಗಳಿಂದ ಪರಿಗಣಿತವಾಗಿದೆ. ಇದು ಮಧ್ಯ ಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ವಿಂಧ್ಯಾಚಲ ಹಾಗೂ ಸಾತ್ಪುಡಾ ಶ್ರೇಣಿಗಳ ಸಂಧಿಸ್ಥಳವಾದ ಅಮರಕಂಟಕ ಎಂಬಲ್ಲಿ ಸಮುದ್ರ ಮಟ್ಟದಿಂದ ಸುಮಾರು 914 ಮೀ. ಎತ್ತರದಲ್ಲಿ ಉಗಮಿಸಿ ಪಶ್ಚಿಮಾಭಿಮುಖವಾಗಿ ಮಂಡಲಾ ಹಾಗೂ ಜಬಲ್ಪುರ ಜಿಲ್ಲೆಗಳ ಮೂಲಕ ಹರಿದು ಗುಜರಾತಿನ ಭಡೋಚದ ಹತ್ತಿರ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಇದರ ಉದ್ದ ಸುಮಾರು 1,282 ಕಿಮೀ. ನದಿಯ ಮೊದಲ ಹರಿವು ಇರುವುದು ಶಿಲಾ ಪ್ರದೇಶದಲ್ಲಿಯೇ. ಇಲ್ಲಿ ಇದರ ಪಾತ್ರ ಕಿರಿದು. ಆದರೆ ಭೂಪಾತಳಿ ಒಂದೇ ಸಮನೆ ಕಡಿಮೆ ಆಗುವುದರಿಂದ ತುಂಬ ರಭಸವಾಗಿ ಹರಿಯುತ್ತದೆ. ಜಬಲ್ಪುರದಿಂದ ಸುಮಾರು 16 ಕಿಮೀ. ದೂರದಲ್ಲಿ ಸುಮಾರು 12 ಮೀ. ಎತ್ತರದ ಜಲಪಾತವಿದೆ. ಮುಂದೆ ಬಹುದೂರದವರೆಗೆ ಈ ನದಿ ಅಮೃತಶಿಲಾ ಪ್ರದೇಶದಲ್ಲಿ ಹರಿಯುತ್ತದೆ. ಮಂಚರ್ ಮತ್ತು ಪುನಾಸಾ ಎಂಬಲ್ಲಿ ಅನೇಕ ಬೀಳುಗಳಿವೆ. ಅಮೃತಶಿಲಾ ಪ್ರದೇಶದಲ್ಲಿ ನದಿಯ ದೃಶ್ಯ ಬಲು ಸುಂದರವಾಗಿದೆ. ಜಬಲ್ಪುರ ಹಾಗೂ ಹೋಶಂಗಾಬಾದ್ ನಡುವೆ ನದಿಯ ದಂಡೆಗಳ ಸರಾಸರಿ ಎತ್ತರ ಸುಮಾರು 12 ಮೀ. ಈ ಪ್ರದೇಶದಲ್ಲಿ ನದಿ ಸುಮಾರು 104 ಮೀ.ಗಳಷ್ಟು ಕೆಳಗಿಳಿಯುತ್ತದೆ. ಮುಂದೆ ಸ್ವಲ್ಪ ದೂರದಲ್ಲೇ ನದಿ ಮೈದಾನವನ್ನು ಪ್ರವೇಶಿಸುತ್ತದೆ.

	ಬಂಜಾರ, ಶೇರ್, ಶಕ್ಕರ್, ತವಾ, ಗಂಜಾಲ್ ಮತ್ತು ಛೋಟಾತವಾ ಇದರ ಮುಖ್ಯ ಉಪನದಿಗಳು. ಇವು ಅನುಕ್ರಮವಾಗಿ ಮಂಡಲಾ, ನರಸಿಂಹಪುರ ಹಾಗೂ ಹೋಶಂಗಾಬಾದ್ ಜಿಲ್ಲೆಗಳಲ್ಲಿ ನರ್ಮದೆಯನ್ನು ಕೂಡುತ್ತವೆ. ಅನಂತರ ಓರ್ಸಂಗ್, ಕರ್ಜನ್, ಅಮರಾವತಿ, ಭೂಖಿ ಮುಂತಾದ ಚಿಕ್ಕ ನದಿಗಳು ನರ್ಮದೆಯನ್ನು ಸೇರುತ್ತವೆ. ನದೀಮುಖದಿಂದ ಸುಮಾರು 48 ಕಿಮೀ. ದೂರದವರೆಗೂ ಇದು ಹಡಗು ಸಂಚಾರಕ್ಕೆ ಯೋಗ್ಯವಾಗಿರುತ್ತದೆ. ಇದರ ದಂಡೆಗಳು ತುಂಬ ಎತ್ತರವಾಗಿರುವುದರಿಂದ ಈ ನದಿ ಕೃಷಿಗೆ ಅಷ್ಟು ಉಪಯುಕ್ತವಾಗಿಲ್ಲ. ಗುಜರಾತಿನಲ್ಲಿ ನವಾಗಾಮದ ಬಳಿ ಇದಕ್ಕೆ ಕಟ್ಟೆ ಕಟ್ಟಿ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುತ್ತದೆ. ಜಬಲ್ಪುರ, ಹೋಶಂಗಾಬಾದ್ ಮತ್ತು ಮೋರಟಕ್ ಎಂಬಲ್ಲಿ ಈ ನದಿಗೆ ರೈಲು ಸೇತುವೆಗಳಿವೆ.

	ಭಾರತದ ನದಿಗಳಲ್ಲಿ ಗಂಗೆಯನ್ನು ಬಿಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಕ್ಷೇತ್ರಗಳಿರುವ ನದಿಯೆಂದರೆ ನರ್ಮದೆಯೇ ಎಂದು ತೋರುತ್ತದೆ. ನದಿಯ ಉಗಮಸ್ಥಾನವಾದ ಅಮರಕಂಟದಲ್ಲಿ ದೇವಾಲಯಗಳು ತುಂಬಿಹೋಗಿವೆ. ಓಂಕಾರೇಶ್ವರದಲ್ಲಿ ಓಂಕಾರೇಶ್ವರ ಜ್ಯೋತಿರ್ಲಿಂಗವಿದೆ. ನೇಮಾವರ, ಶುಕ್ಲತೀರ್ಥ ಮುಂತಾದ ತೀರ್ಥಕ್ಷೇತ್ರಗಳು ಭಕ್ತರನ್ನು ಸದಾ ಆಕರ್ಷಿಸುತ್ತವೆ.

	ಮಹಾಭಾರತ ಮತ್ತು ರಾಮಾಯಣಗಳಲ್ಲಿ ಇದನ್ನು ರೀವಾ ಎಂದು ಹೆಸರಿಸಲಾಗಿದೆ. ಇದು ಶಿವನ ಶರೀರದಿಂದಲೇ ಉಗಮಿಸುತ್ತದೆ ಎಂದು ಇಲ್ಲಿಯ ಜನ ನಂಬುವುದರಿಂದ ಅವರಿಗೆ ಇದು ಗಂಗೆಗಿಂತಲೂ ಪವಿತ್ರ. ಗಂಗೆ ವರ್ಷಕ್ಕೊಮ್ಮೆ ಕಪ್ಪುಗೋವಿನ ರೂಪದಲ್ಲಿ ಬಂದು ನರ್ಮದೆಯಲ್ಲಿ ಮಿಂದು ತನ್ನ ಪಾಪಗಳನ್ನೆಲ್ಲ ತೊಳೆದುಕೊಂಡು ಶ್ವೇತರೂಪ ಪಡೆದು ಹಿಂದಿರುಗುತ್ತದೆಂದು ಪ್ರತೀತಿ.

	ಉತ್ತರ ಹಾಗೂ ದಕ್ಷಿಣ ಭಾರತಗಳ ಗಡಿರೇಖೆ ನರ್ಮದೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.	
    (ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ